Tuesday, December 11, 2012

ಅಂತರಂಗದ ಮೃದಂಗ - ದ.ರಾ.ಬೇಂದ್ರೆ


ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ
ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ
ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ
ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ....