Friday, March 3, 2017

ದೇವರಾಗಲು ಹೊರಟಿದ್ದೇವೆ. !

ಎಲ್ಲವನ್ನು, ಎಲ್ಲರನ್ನು,
ಸಹಿಸುವ ಭುವಿ ಮೇಲಿದ್ದರೂ,
ಕಂಡು - ಕಾಣದಂತೆ ಬದುಕುವ ನಾವು,
 ದೇವರಾಗಲು ಹೊರಟಿದ್ದೇವೆ. !


ಹಸಿವು, ಬಾಯಾರಿಕೆಯೇ
ಕಾಣದ  ನಮ್ಮೊಡಲು,
ಬಡತನವ ಹೀಯಾಳಿಸುವ  ನಾವು, 
 ದೇವರಾಗಲು ಹೊರಟಿದ್ದೇವೆ. !


ನಮಗೆ ಮಾತ್ರ ಸೀಮಿತವಾದ
ಸುಖ - ಸಂತೋಷವ ಸವೆಯುತ್ತ
ಪರರ ದುಃಖವನ್ನು ಸಂಭ್ರಮಿಸುವ  ನಾವು, 
 ದೇವರಾಗಲು ಹೊರಟಿದ್ದೇವೆ. !


ನಾನೆಂಬುದೇ ಸತ್ಯ
ಮಿಕ್ಕಿದ್ದೆಲ್ಲವೂ ಮಿಥ್ಯವೆನ್ನುತ್ತ,
ವಿಷ ಬೀಜಗಳ ಬಿತ್ತುವ ನಾವು,
 ದೇವರಾಗಲು ಹೊರಟಿದ್ದೇವೆ. !

Thursday, March 2, 2017

ನರಕದಲ್ಲೊಂದು ಸ್ವರ್ಗ - ೨
ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿರುವಾಗ ಎಬ್ಬಿಸುತ್ತಿದ್ದ ರಂಭೆ, ತಿಗಣೆಯಂತೆ ರಕ್ತ ಹೀರಿಕೊಂಡ ಮೇಲೆ, ಅವಳನ್ನು ನೋಡಿ ನನಗೇನಾದರೂ ರಕ್ತದ ಒತ್ತಡ ಹೆಚ್ಚಾಗಿದೆಯಾ ಎಂದು ಪರೀಕ್ಷಿಸುತ್ತಿದ್ದಳು, ಅದಾದ ನಂತರ, ನನ್ನ ನಿತ್ಯ ಕರ್ಮಗಳ ಮುಗಿಸಲು ಪಂಚ ವಾರ್ಷಿಕ ಯೋಜನೆ ಪ್ರಾರಂಭ ಆಗುತಿತ್ತು.

ತಿಂಡಿ ತಿನ್ನುವ ಮುಂಚೆ ಒಂದಿಷ್ಟು ಔಷದಿ,ತಿಂಡಿ ತಿಂದಾದ ಮೇಲೆ ಒಂದಿಷ್ಟು ಔಷದಿ ಹಾಕುತ್ತಿದ್ದರು,
ಅದಾದ ಸ್ವಲ್ಪ ಹೊತ್ತಿಗೆ ಮತ್ತೆ ಸ್ವರ್ಗವಾಸಿಯಾಗುತ್ತಿದ್ದೆ, ಯಾರಾದರೂ ಬಂದರೆ ಮಾತ್ರ ನನ್ನನ್ನು
ಎಚ್ಚರಿಸುತ್ತಿದ್ದರು, ಮಿಕ್ಕಾಗಲೆಲ್ಲ ಚರ್ಮವಿಲ್ಲದ ಬೆನ್ನನ್ನು ಪಕ್ಕಕ್ಕೆ ಹಾಕಿ ಮಲಗುತ್ತಿದ್ದೆ.

ಬಿಳಿ ಕೋಟ್ ಧರಿಸಿದ ಡ್ಯೂಟಿ ದೇವರು ಬಂದಾಗ ಕಿವಿ ಕೇಳಿಸ್ತಿಲ್ಲ ಅಂದೇ, ಅಷ್ಟೇ ನೋಡಪ್ಪ
ಮೇನಕೆ ಹತ್ರ ಏನೋ ಹೇಳಿದರು, ಆಕೆ ತಲೆಯಾಡಿಸುತ್ತಾ ಅದೇನೋ ಬರ್ಕೊಂಡು, ಆಚೆ ಹೋದ್ರು.. ಸಧ್ಯ ಮುಗೀತಲ್ಲ ಅಂತ ಇನ್ನೇನು ದಬ್ಬಾಕೋಬೇಕು ಅನ್ನೋಷ್ಟರಲ್ಲಿ, ಇನ್ನೊಂದ್ ದೇವ್ರು ಬಂತು, ನನ್ನ ಎರೆಡು ಕಿವಿ ಹಿಡಿದು ನೋಡಿತು ಆಮೇಲೆ ಅದೇನೋ ಕೇಳ್ತು ... ನನಗೆ ಕೇಳಿಸುತ್ತಿಲ್ಲ ಅಂದೇ ... ಅದೇನೋ ಮಾಡಬಾರದ ತಪ್ಪು ಮಾಡಿದ್ದೀನಿ ಅನ್ನುವ ತರಹ ಮುಖ ಮಾಡ್ಕೊಂಡು ಆಚೆ ಹೋಯ್ತು...

ಅದಾದ ಹತ್ತು ನಿಮಿಷಕ್ಕೆ ತಿಲೋತ್ತಮೆ ಕೈಯಲ್ಲಿ ಒಂದು ಬಿಳಿ ಹಾಳೆ ಹಿಡ್ಕೊಂಡ್ ಬಂದ್ರು, ನನ್ನ ಕಾಟ ತಡೀಲಾರದೆ ದೇವ್ರು ರಾಜೀನಾಮೆ ಕೊಟ್ರಾ ?? ಅಂತ ಒಂದ್ ಸೆಕೆಂಡ್ ಡೌಟ್ ಆಯ್ತು. ಆ ಹಾಳೆಯಲ್ಲಿದ್ದ ವಿಷಯ ಓದಿದ್ ಮೇಲೆ ಅಂತದ್ದೇನು ಆಗಿಲ್ಲ ಅಂತ ಸಮಾಧಾನ ಆಯ್ತು.

ಕೋಮಾದಲ್ಲಿದ್ದ ಬಾಡಿನಾ ಯಮಕಿಂಕರರು ಏತ್ ಹಾಕೊಂಡ್ ಹೋದಾಗ ಚಿತ್ರಗುಪ್ತ ಕೇಳ್ಬಹುದಾದ ಪ್ರಶ್ನೆಗಳು ಹೀಗಿವೆ ...

ನೀನು ಯಾರು  ಮತ್ತು ನಿನ್ನ ಹೆಸರೇನು

ನಿನ್ನ ಜೊತೆ ಯಾರ್ ಯಾರಿದ್ದಾರೆ

ನಿನ್ ಹೆಂಡತಿ ಮತ್ತು ಮಕ್ಕಳ ಹೆಸರೇನು

ನಿನ್ನ ಮನೆಯ ವಿಳಾಸ ತಿಳಿಸು

ನೀನು ಎಲ್ಲಿದ್ಯಾ ಗೊತ್ತಾ !!!


ಮುಂದುವರೆಯುವುದು  - ಸ್ವಪ್ನಲೋಕದ ಸುಂದರಿ ... ನಗು ನಗುತಾ ಇಟ್ಟ ಬತ್ತಿ  

Wednesday, March 1, 2017

ನರಕದಲ್ಲೊಂದು ಸ್ವರ್ಗ - 1ಆಗಾಗ ಬರುತ್ತಿದ್ದ ಹೊಟ್ಟೆ ನೋವನ್ನು ಗೇಲಿ ಮಾಡುತ್ತ ಒಬ್ಬ ಗೆಳೆಯನ ಹತ್ರ ಹೇಳಿದ್ದೆ,

ನಾನು ಪ್ರಾಯಶಃ ಗರ್ಭಿಣಿ ಇರಬೇಕು ಅದಕ್ಕೆ ಹೀಗೆ ಪದೇ ಪದೇ ಹೊಟ್ಟೆ ನೋವು ಬರುತ್ತಿದೆ ಎಂದು,
ಆಸ್ಪತ್ರೆಗೆ ಹೋಗೋ ಹಾಗಿದ್ರೆ, ಎಲ್ಲಿ ನರ್ಸ್ ಮತ್ತು ಡಾಕ್ಟರ್ ಗಳು ಚೆನ್ನಾಗಿರ್ತಾರೋ, ಅಲ್ಲೇ ಅಡ್ಮಿಟ್
ಆಗು, ಅಂತ.

ಜೂಲೈ ೩೧ ... ನನ್ನ cancer surgery ಆದ ದಿನ, ಸರಿಯಾಗಿ  ೧೬ ವರ್ಷಗಳ ನಂತರ, ರಾತ್ರಿಯೆಲ್ಲ ಅಸಾಧ್ಯ  De Hydration ಇಂದ ನಿದ್ದೆ ಇಲ್ಲದೆ ಒದ್ದಾಡಿದೆ, ಬೆಳಕಾಗುತ್ತಿದ್ದಂತೆ, ಅದರ ಜೊತೆಗೆ ಚಳಿ ಜ್ವರ ಶುರವಾಯಿತು. ಎಲ್ಲರ ಬಲವಂತದ ಮೇರೆಗೆ ಕ್ಯಾಬ್ ಅಲ್ಲಿ ಕುಳಿತಿದ್ದಷ್ಟೆ ನೆನಪು...

ಆಗಾಗ ಬರುತ್ತಿದ್ದ ಅಪ್ಸರೆ, ಮೇನಕೆಯರ ಕೈಯಲ್ಲಿ ಔಷದಿ, ನನ್ನ ಬಲಗಡೆ ನೇತಾಡುತ್ತಿದ್ದ ನೀರಿನ ಚೀಲಕ್ಕೆ, ಇಂಜೆಕ್ಷನ್  ಮೂಲಕ ಮದಿರೆಯ ಮದವೇರಿಸುತ್ತಿದ್ದರು, ಒಂದೈದು ನಿಮಿಷ ಕಣ್ಣು ಬಿಟ್ಟರೆ, ಮತ್ತೆ ಸ್ವರ್ಗದಲ್ಲಿ ವಿಹರಿಸುತ್ತಿದ್ದೆ.


ಒಂದು ವಾರದ ನಂತರ ವಾರ್ಡಿಗೆ ಶಿಫ್ಟ್ ಆದೆ, ಔಷದಿಯ ಅಸಾಧ್ಯ ಮಂಪರು, ಬಾಯಿಗೆ ಬಂದದ್ದೇ ಬಡಬಡಿಸುತ್ತ,  ನನ್ನನ್ನು ನೋಡಲು ಯಾಕೆ ಇಷ್ಟೊಂದು ಜನ ಬರುತ್ತಿದ್ದಾರೆ ಎನ್ನುವ ಸೋಜಿಗ !

ಯಾರು ಏನು ಹೇಳಿದರು ಕೇಳಿಸುತ್ತಿಲ್ಲ, ನನಗ್ಯಾಕೋ ಡೌಟ್ ಶುರುವಾಯ್ತು, ನಿಜವಾಗ್ಲೂ ಸ್ವರ್ಗಕ್ಕೆ ಬಂದಿದ್ದೀನಾ !!

ಎಷ್ಟು ಸೈಲೆಂಟ್ ಆಗಿದೆ, ಆಗಾಗ ನನ್ನನ್ನು ನೋಡಿಕ್ಕೊಳ್ಳಲು ಬರುವ ದೇವಲೋಕದ ಸುಂದರಿಯರು, ನನ್ನ ಕ್ಷೇಮ ಸಮಾಚಾರವನ್ನು ವಿಚಾರಿಸಲು ಬರುವ ಬಿಳಿ ಕೋಟ್ ಧರಿಸಿರುವ ಡ್ಯೂಟಿ ದೇವರು, ಅವರ ಸುತ್ತ ನಿಲ್ಲುವ ದೇವಲೋಕದ ಬೆಡಗಿಯರು ... ವಾಹ್ !! ಎಷ್ಟು ಸುಂದರ ಪ್ರಪಂಚವಿದು ಎಂದು ಯೋಚಿಸುತ್ತ ಏಳಲು ಪ್ರಯತ್ನಿಸಿದೆ !

ಆಗಲೇ ಗೊತ್ತಾಗಿದ್ದು ನೋಡಿ ....  ನಾನು ಬದುಕಿದ್ದು ಹೆಣದಂತಿರುವ ಸ್ಥಿತಿ,
ಕೈ ಕಾಲು ನೋಡಿಕೊಂಡೆ, ಮೂಳೆಯ ಮೇಲೊಂದು ಚರ್ಮ ಹೊದ್ದಿಸಿದಂತಿತ್ತು .. ಮುಖ ಮುಟ್ಟಿಕೊಂಡರೆ ...ಬೆಳೆದು ನಿಂತಿದ್ದ ಮೀಸೆ ಗಡ್ಡ, ಟಾಯ್ಲೆಟ್ ಗೆ ಹೋಗಬೇಕೆಂದರೆ ಸರ್ಕಾರದ
ಪಂಚ ವಾರ್ಷಿಕ ಯೋಜನೆಯಂತೆ ತಯ್ಯಾರ್ ಆಗಬೇಕಿತ್ತು, ಎಷ್ಟೋ ಶತಮಾನದಿಂದ ಹಾಸಿಗೆ ಹಿಡಿದ್ದಿದ್ದೇನೆ ಎನ್ನುವಂತಾಗಿತ್ತು.

ನನ್ನ ಹಿಂಭಾಗದಲ್ಲಿ ಚರ್ಮವೇ ಇರಲಿಲ್ಲ... ಕೂತರೆ ಅಥವಾ ಮಲಗಿದರೆ, ಯಾರೋ ಗಾಯಕ್ಕೆ ಸುಣ್ಣ ಅಥವಾ ಮೆಣಸಿನ ಪುಡಿ ಹಾಕುತ್ತಿದ್ದಾರೆ ಎನ್ನುವಂತೆ ಭಾಸವಾಗುತಿತ್ತು...

ದೇಹದ ನೋವು ಮನಸ್ಸಿಗೆ ತಾಕದಂತೆ ಬದುಕುವ ಅನಿವಾರ್ಯತೆ ಇತ್ತು ...