Friday, March 3, 2017

ದೇವರಾಗಲು ಹೊರಟಿದ್ದೇವೆ. !

ಎಲ್ಲವನ್ನು, ಎಲ್ಲರನ್ನು,
ಸಹಿಸುವ ಭುವಿ ಮೇಲಿದ್ದರೂ,
ಕಂಡು - ಕಾಣದಂತೆ ಬದುಕುವ ನಾವು,
 ದೇವರಾಗಲು ಹೊರಟಿದ್ದೇವೆ. !


ಹಸಿವು, ಬಾಯಾರಿಕೆಯೇ
ಕಾಣದ  ನಮ್ಮೊಡಲು,
ಬಡತನವ ಹೀಯಾಳಿಸುವ  ನಾವು, 
 ದೇವರಾಗಲು ಹೊರಟಿದ್ದೇವೆ. !


ನಮಗೆ ಮಾತ್ರ ಸೀಮಿತವಾದ
ಸುಖ - ಸಂತೋಷವ ಸವೆಯುತ್ತ
ಪರರ ದುಃಖವನ್ನು ಸಂಭ್ರಮಿಸುವ  ನಾವು, 
 ದೇವರಾಗಲು ಹೊರಟಿದ್ದೇವೆ. !


ನಾನೆಂಬುದೇ ಸತ್ಯ
ಮಿಕ್ಕಿದ್ದೆಲ್ಲವೂ ಮಿಥ್ಯವೆನ್ನುತ್ತ,
ವಿಷ ಬೀಜಗಳ ಬಿತ್ತುವ ನಾವು,
 ದೇವರಾಗಲು ಹೊರಟಿದ್ದೇವೆ. !

Thursday, March 2, 2017

ನರಕದಲ್ಲೊಂದು ಸ್ವರ್ಗ - ೨




ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿರುವಾಗ ಎಬ್ಬಿಸುತ್ತಿದ್ದ ರಂಭೆ, ತಿಗಣೆಯಂತೆ ರಕ್ತ ಹೀರಿಕೊಂಡ ಮೇಲೆ, ಅವಳನ್ನು ನೋಡಿ ನನಗೇನಾದರೂ ರಕ್ತದ ಒತ್ತಡ ಹೆಚ್ಚಾಗಿದೆಯಾ ಎಂದು ಪರೀಕ್ಷಿಸುತ್ತಿದ್ದಳು, ಅದಾದ ನಂತರ, ನನ್ನ ನಿತ್ಯ ಕರ್ಮಗಳ ಮುಗಿಸಲು ಪಂಚ ವಾರ್ಷಿಕ ಯೋಜನೆ ಪ್ರಾರಂಭ ಆಗುತಿತ್ತು.

ತಿಂಡಿ ತಿನ್ನುವ ಮುಂಚೆ ಒಂದಿಷ್ಟು ಔಷದಿ,ತಿಂಡಿ ತಿಂದಾದ ಮೇಲೆ ಒಂದಿಷ್ಟು ಔಷದಿ ಹಾಕುತ್ತಿದ್ದರು,
ಅದಾದ ಸ್ವಲ್ಪ ಹೊತ್ತಿಗೆ ಮತ್ತೆ ಸ್ವರ್ಗವಾಸಿಯಾಗುತ್ತಿದ್ದೆ, ಯಾರಾದರೂ ಬಂದರೆ ಮಾತ್ರ ನನ್ನನ್ನು
ಎಚ್ಚರಿಸುತ್ತಿದ್ದರು, ಮಿಕ್ಕಾಗಲೆಲ್ಲ ಚರ್ಮವಿಲ್ಲದ ಬೆನ್ನನ್ನು ಪಕ್ಕಕ್ಕೆ ಹಾಕಿ ಮಲಗುತ್ತಿದ್ದೆ.

ಬಿಳಿ ಕೋಟ್ ಧರಿಸಿದ ಡ್ಯೂಟಿ ದೇವರು ಬಂದಾಗ ಕಿವಿ ಕೇಳಿಸ್ತಿಲ್ಲ ಅಂದೇ, ಅಷ್ಟೇ ನೋಡಪ್ಪ
ಮೇನಕೆ ಹತ್ರ ಏನೋ ಹೇಳಿದರು, ಆಕೆ ತಲೆಯಾಡಿಸುತ್ತಾ ಅದೇನೋ ಬರ್ಕೊಂಡು, ಆಚೆ ಹೋದ್ರು.. ಸಧ್ಯ ಮುಗೀತಲ್ಲ ಅಂತ ಇನ್ನೇನು ದಬ್ಬಾಕೋಬೇಕು ಅನ್ನೋಷ್ಟರಲ್ಲಿ, ಇನ್ನೊಂದ್ ದೇವ್ರು ಬಂತು, ನನ್ನ ಎರೆಡು ಕಿವಿ ಹಿಡಿದು ನೋಡಿತು ಆಮೇಲೆ ಅದೇನೋ ಕೇಳ್ತು ... ನನಗೆ ಕೇಳಿಸುತ್ತಿಲ್ಲ ಅಂದೇ ... ಅದೇನೋ ಮಾಡಬಾರದ ತಪ್ಪು ಮಾಡಿದ್ದೀನಿ ಅನ್ನುವ ತರಹ ಮುಖ ಮಾಡ್ಕೊಂಡು ಆಚೆ ಹೋಯ್ತು...

ಅದಾದ ಹತ್ತು ನಿಮಿಷಕ್ಕೆ ತಿಲೋತ್ತಮೆ ಕೈಯಲ್ಲಿ ಒಂದು ಬಿಳಿ ಹಾಳೆ ಹಿಡ್ಕೊಂಡ್ ಬಂದ್ರು, ನನ್ನ ಕಾಟ ತಡೀಲಾರದೆ ದೇವ್ರು ರಾಜೀನಾಮೆ ಕೊಟ್ರಾ ?? ಅಂತ ಒಂದ್ ಸೆಕೆಂಡ್ ಡೌಟ್ ಆಯ್ತು. ಆ ಹಾಳೆಯಲ್ಲಿದ್ದ ವಿಷಯ ಓದಿದ್ ಮೇಲೆ ಅಂತದ್ದೇನು ಆಗಿಲ್ಲ ಅಂತ ಸಮಾಧಾನ ಆಯ್ತು.

ಕೋಮಾದಲ್ಲಿದ್ದ ಬಾಡಿನಾ ಯಮಕಿಂಕರರು ಏತ್ ಹಾಕೊಂಡ್ ಹೋದಾಗ ಚಿತ್ರಗುಪ್ತ ಕೇಳ್ಬಹುದಾದ ಪ್ರಶ್ನೆಗಳು ಹೀಗಿವೆ ...

ನೀನು ಯಾರು  ಮತ್ತು ನಿನ್ನ ಹೆಸರೇನು

ನಿನ್ನ ಜೊತೆ ಯಾರ್ ಯಾರಿದ್ದಾರೆ

ನಿನ್ ಹೆಂಡತಿ ಮತ್ತು ಮಕ್ಕಳ ಹೆಸರೇನು

ನಿನ್ನ ಮನೆಯ ವಿಳಾಸ ತಿಳಿಸು

ನೀನು ಎಲ್ಲಿದ್ಯಾ ಗೊತ್ತಾ !!!


ಮುಂದುವರೆಯುವುದು  - ಸ್ವಪ್ನಲೋಕದ ಸುಂದರಿ ... ನಗು ನಗುತಾ ಇಟ್ಟ ಬತ್ತಿ  

Wednesday, March 1, 2017

ನರಕದಲ್ಲೊಂದು ಸ್ವರ್ಗ - 1



ಆಗಾಗ ಬರುತ್ತಿದ್ದ ಹೊಟ್ಟೆ ನೋವನ್ನು ಗೇಲಿ ಮಾಡುತ್ತ ಒಬ್ಬ ಗೆಳೆಯನ ಹತ್ರ ಹೇಳಿದ್ದೆ,

ನಾನು ಪ್ರಾಯಶಃ ಗರ್ಭಿಣಿ ಇರಬೇಕು ಅದಕ್ಕೆ ಹೀಗೆ ಪದೇ ಪದೇ ಹೊಟ್ಟೆ ನೋವು ಬರುತ್ತಿದೆ ಎಂದು,
ಆಸ್ಪತ್ರೆಗೆ ಹೋಗೋ ಹಾಗಿದ್ರೆ, ಎಲ್ಲಿ ನರ್ಸ್ ಮತ್ತು ಡಾಕ್ಟರ್ ಗಳು ಚೆನ್ನಾಗಿರ್ತಾರೋ, ಅಲ್ಲೇ ಅಡ್ಮಿಟ್
ಆಗು, ಅಂತ.

ಜೂಲೈ ೩೧ ... ನನ್ನ cancer surgery ಆದ ದಿನ, ಸರಿಯಾಗಿ  ೧೬ ವರ್ಷಗಳ ನಂತರ, ರಾತ್ರಿಯೆಲ್ಲ ಅಸಾಧ್ಯ  De Hydration ಇಂದ ನಿದ್ದೆ ಇಲ್ಲದೆ ಒದ್ದಾಡಿದೆ, ಬೆಳಕಾಗುತ್ತಿದ್ದಂತೆ, ಅದರ ಜೊತೆಗೆ ಚಳಿ ಜ್ವರ ಶುರವಾಯಿತು. ಎಲ್ಲರ ಬಲವಂತದ ಮೇರೆಗೆ ಕ್ಯಾಬ್ ಅಲ್ಲಿ ಕುಳಿತಿದ್ದಷ್ಟೆ ನೆನಪು...

ಆಗಾಗ ಬರುತ್ತಿದ್ದ ಅಪ್ಸರೆ, ಮೇನಕೆಯರ ಕೈಯಲ್ಲಿ ಔಷದಿ, ನನ್ನ ಬಲಗಡೆ ನೇತಾಡುತ್ತಿದ್ದ ನೀರಿನ ಚೀಲಕ್ಕೆ, ಇಂಜೆಕ್ಷನ್  ಮೂಲಕ ಮದಿರೆಯ ಮದವೇರಿಸುತ್ತಿದ್ದರು, ಒಂದೈದು ನಿಮಿಷ ಕಣ್ಣು ಬಿಟ್ಟರೆ, ಮತ್ತೆ ಸ್ವರ್ಗದಲ್ಲಿ ವಿಹರಿಸುತ್ತಿದ್ದೆ.


ಒಂದು ವಾರದ ನಂತರ ವಾರ್ಡಿಗೆ ಶಿಫ್ಟ್ ಆದೆ, ಔಷದಿಯ ಅಸಾಧ್ಯ ಮಂಪರು, ಬಾಯಿಗೆ ಬಂದದ್ದೇ ಬಡಬಡಿಸುತ್ತ,  ನನ್ನನ್ನು ನೋಡಲು ಯಾಕೆ ಇಷ್ಟೊಂದು ಜನ ಬರುತ್ತಿದ್ದಾರೆ ಎನ್ನುವ ಸೋಜಿಗ !

ಯಾರು ಏನು ಹೇಳಿದರು ಕೇಳಿಸುತ್ತಿಲ್ಲ, ನನಗ್ಯಾಕೋ ಡೌಟ್ ಶುರುವಾಯ್ತು, ನಿಜವಾಗ್ಲೂ ಸ್ವರ್ಗಕ್ಕೆ ಬಂದಿದ್ದೀನಾ !!

ಎಷ್ಟು ಸೈಲೆಂಟ್ ಆಗಿದೆ, ಆಗಾಗ ನನ್ನನ್ನು ನೋಡಿಕ್ಕೊಳ್ಳಲು ಬರುವ ದೇವಲೋಕದ ಸುಂದರಿಯರು, ನನ್ನ ಕ್ಷೇಮ ಸಮಾಚಾರವನ್ನು ವಿಚಾರಿಸಲು ಬರುವ ಬಿಳಿ ಕೋಟ್ ಧರಿಸಿರುವ ಡ್ಯೂಟಿ ದೇವರು, ಅವರ ಸುತ್ತ ನಿಲ್ಲುವ ದೇವಲೋಕದ ಬೆಡಗಿಯರು ... ವಾಹ್ !! ಎಷ್ಟು ಸುಂದರ ಪ್ರಪಂಚವಿದು ಎಂದು ಯೋಚಿಸುತ್ತ ಏಳಲು ಪ್ರಯತ್ನಿಸಿದೆ !

ಆಗಲೇ ಗೊತ್ತಾಗಿದ್ದು ನೋಡಿ ....  ನಾನು ಬದುಕಿದ್ದು ಹೆಣದಂತಿರುವ ಸ್ಥಿತಿ,
ಕೈ ಕಾಲು ನೋಡಿಕೊಂಡೆ, ಮೂಳೆಯ ಮೇಲೊಂದು ಚರ್ಮ ಹೊದ್ದಿಸಿದಂತಿತ್ತು .. ಮುಖ ಮುಟ್ಟಿಕೊಂಡರೆ ...ಬೆಳೆದು ನಿಂತಿದ್ದ ಮೀಸೆ ಗಡ್ಡ, ಟಾಯ್ಲೆಟ್ ಗೆ ಹೋಗಬೇಕೆಂದರೆ ಸರ್ಕಾರದ
ಪಂಚ ವಾರ್ಷಿಕ ಯೋಜನೆಯಂತೆ ತಯ್ಯಾರ್ ಆಗಬೇಕಿತ್ತು, ಎಷ್ಟೋ ಶತಮಾನದಿಂದ ಹಾಸಿಗೆ ಹಿಡಿದ್ದಿದ್ದೇನೆ ಎನ್ನುವಂತಾಗಿತ್ತು.

ನನ್ನ ಹಿಂಭಾಗದಲ್ಲಿ ಚರ್ಮವೇ ಇರಲಿಲ್ಲ... ಕೂತರೆ ಅಥವಾ ಮಲಗಿದರೆ, ಯಾರೋ ಗಾಯಕ್ಕೆ ಸುಣ್ಣ ಅಥವಾ ಮೆಣಸಿನ ಪುಡಿ ಹಾಕುತ್ತಿದ್ದಾರೆ ಎನ್ನುವಂತೆ ಭಾಸವಾಗುತಿತ್ತು...

ದೇಹದ ನೋವು ಮನಸ್ಸಿಗೆ ತಾಕದಂತೆ ಬದುಕುವ ಅನಿವಾರ್ಯತೆ ಇತ್ತು ...

Saturday, December 10, 2016

ಎ ಟಿ ಎಂ ಅವಾಂತರ 


ಹೊಸ ಹಣಕಾಸು ನೀತಿ ಜಾರಿಯಾದ ನಂತರ, ಜನಸಾಮಾನ್ಯರು ಅದನ್ನು ಒಪ್ಪಿಕೊಂಡಿರುವುದೇನೋ ಸರಿ,
 ಆದರೆ ಅನುಸರಿಸುತ್ತಿರುವ ರೀತಿ  ಮಾತ್ರ ಚಿತ್ರ ವಿಚಿತ್ರ.

ಯಾವ ಎ ಟಿ ಎಂ ಅಲ್ಲಿ ದುಡ್ಡಿದ್ಯೋ, ಅಲ್ಲೊಂದು ಕ್ಯೂ, ಎಲ್ಲ ವಯಸ್ಸಿನ ಜನರು ಯಾವುದೋ
ಶೋಕಾಚರಣೆಗೆ ಬಂದಿರುವಂತೆ, ದೀರ್ಘಾಲೋಚನೆ ಮಾಡುತ್ತಾ ನಿಂತಿರುವುದನ್ನು ಗಮನಿಸಬಹುದು.
ಕೆಲವರಿಗೆ ಬದಲಾವಣೆಯಲ್ಲಿ  ಖುಷಿಯಾದರೆ, ಕೆಲವರಿಗೆ ದುಃಖ.

ಯುವ ಜನತೆಯ ಉತ್ಸಾಹವನ್ನು ಇಲ್ಲಿ ಮೆಚ್ಚಲೇಬೇಕು, " ಮಚ್ಚಾ / ಗುರು, ಕ್ಯೂ ಅಲ್ಲಿ ನಿಂತಿದ್ದೀನಿ,
ಇನ್ನೊಂದ್ ೧೦ ಜನ ಇದಾರೆ ಅಷ್ಟೇ, ನಿಂಗು ಕಾಸ್ ಬೇಕಾದ್ರೆ ಬೇಗ ಬಾ ಅಂತ ಫೋನ್ ಇಡುತ್ತಿದಂತೆ,
ಒಂದಿಬ್ಬರು ದೇವರಿಗಿಂತ ವೇಗವಾಗಿ ಪ್ರತ್ಯಕ್ಷ ಆಗ್ತಾರೆ. ಇವರ ಈ ವರ್ತನೆಯಿಂದ, ಇವರ ಹಿಂದೆ ನಿಂತಿರುವ
ಮತ್ತು ದುಡ್ಡಿನ ಅತ್ಯಂತ ಅವಶ್ಯಕತೆ ಇರುವ ಯಾವುದೋ ವ್ಯಕ್ತಿಗೆ ದುಡ್ಡು ಸಿಗದಂತೆ ಆಗಬಹುದು ಎನ್ನುವ
ಸಣ್ಣ ಕಾಳಜಿ ಕೂಡ ಇವರಿಗೆ  ಇರುವುದಿಲ್ಲ.

ಇನ್ನು ವಯಸ್ಸಾದವರ ಪಾಡು ಮಾತ್ರ ಕೇಳಲೇಬೇಡಿ, ಅವರ ಸರಧಿ ಬರುವವರೆಗೂ ಕುಳಿತಿರುವ
ವ್ಯವಸ್ಥೆಯಾಗಲಿ, ಅಥವ ಸಾರ್ವಜನಿಕರಿಗೆ ಅವರ ಬಗ್ಗೆ ಕನಿಕರ ಇರುವುದು ತೀರಾ ಕಡಿಮೆ.

ಎ ಟಿ ಎಂ ಒಳಗೆ ಒಬ್ಬರೇ ಇರಬೇಕು, ಆದರೆ ಇಲ್ಲಿ ಕ್ಯೂ ಹಿಂಬಾಲಿಸುತ್ತದೆ, ಇನ್ನು ಕೆಲವು ಸಲ
ಆ ಸೆಕ್ಯೂರಿಟಿ ಗಾರ್ಡ್ ಕೂಡ ಫೋನಿನಲ್ಲಿ ಮಾತನಾಡುತ್ತ, ಎ ಟಿ ಎಂ ಒಳಗೆ  ಇರುತ್ತಾರೆ.

ಯಾವುದಕ್ಕಾಗಿ ಈ ಆತುರ !

ಎ ಟಿ ಎಂ ಬಳಸುವಾಗ ಅನುಸರಿಸಬೇಕಾದ ವಿಧಾನ 

೧.  ಹೆಲ್ಮೆಟ್ ಧರಿಸಿ ಎ ಟಿ ಎಂ ಒಳಗೆ ಹೋಗಬಾರದು

೨.  ಫೋನಿನಲ್ಲಿ ಮಾತನಾಡಬಾರದು

೩.  ಹಣ ಪಡೆಯಲು  ಹೋದವರು ಮಾತ್ರ ಎ ಟಿ ಎಂ ಒಳಗೆ ಇರಬೇಕು.

೪.  ಯಾರಾದರೂ ಹಣ ಪಡೆಯುತ್ತಿದ್ದರೇ, ಅವರು ಹೊರ ಬರುವವರೆಗೂ ಕಾಯಬೇಕು

೫.  ನಾವು ಕ್ಯೂನಲ್ಲಿದ್ದು, ಸ್ನೇಹಿತರನ್ನು ಕರೆದು ನಮ್ಮೊಂದಿಗೆ ನಿಲ್ಲಿಸಿಕೊಳ್ಳಬಾರದು

೬.  ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಇದ್ದಲ್ಲಿ, ಹಣ ಪಡೆದ ಮತ್ತು ಬಾಕಿ ಇರುವ ಮೊತ್ತದ
ಸೂಚನೆ ಮೊಬೈಲ್ ಅಲ್ಲೇ ನೋಡಬಹುದು,  ಕಸದ ಬುಟ್ಟಿ ತುಂಬಿಸಲು ಪ್ರಿಂಟ್ ಔಟ್ ಯಾಕೆ ??

ನಿಮಗೆ ಇದನ್ನು ಪಾಲಿಸುವ ಉದ್ದೇಶವಿಲ್ಲದಿದ್ದರೆ, ದಯಮಾಡಿ ತಿಳಿಸಿ. ನೀವು ನಿಂತಿರುವ
ಎ ಟಿ ಎಂ ಕ್ಯೂ ನಲ್ಲಿ, ನಾನು ನಿಲ್ಲುವುದಿಲ್ಲ.

Wednesday, September 28, 2016

ಮ್ಯೂಟ್ ಬಟನ್ - 1

ಪ್ರೀತಿಯ ಸ್ನೇಹಿತರೆ,

ಮ್ಯೂಟ್ ಬಟನ್

ಬದುಕಿನುದ್ದಕ್ಕೂ ಎಲ್ಲವು ನೆಟ್ಟಗಿರುವ ಒಬ್ಬ ವ್ಯಕ್ತಿಗೆ, ಇದ್ದಕ್ಕಿದ್ದಂತೆ ಏನು ಕೇಳಿಸದಾದಾಗ
ಹೇಗಾಗಿರಬಾರದು  ???

ಈ ಬ್ಲಾಗಿನ ಮುಖೇನ ನನ್ನ ಬದುಕಿನ ಪಥವನ್ನು ನಿಮ್ಮೊಂದಿಗೆ ಹಂಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ,
ತಪ್ಪಿದ್ದಲ್ಲಿ, ತಿದ್ದಿ, ತೀಡಿ, ಕೈ ಜೋಡಿಸಿ.

ಮ್ಯೂಟ್ ಬಟನ್ ಒಂದು  ಸರಣಿ ... ಒಂದು ಪುಟದಲ್ಲಿ ಮುಗಿಯದ ಕಥೆ ..
*********************************


ಒಂದು ದಿನ ಇದಕ್ಕಿದ್ದಂತೆ ಅಣ್ಣವರು ಕಿಡ್ನಾಪ್ ಆದ ದಿನದ ತರಹ, ಎಲ್ಲವೂ ಮೌನ.

ಟಿ ವಿ ಲಿ ಯಾರೋ ಮಾತಾಡ್ತಾ ಇರೋವಾಗ ಮ್ಯೂಟ್ ಬಟನ್ ಒತ್ತಿದರೆ, ಹೇಗಿರತ್ತೋ
ಹಾಗೆಯೇ ವಾಸ್ತವದಲ್ಲಿ ನನ್ನ ಸುತ್ತ ಮುತ್ತ ಇರೋವ್ರು ಕಾಣಿಸ್ತಿದ್ರು. ಎಲ್ಲರು ಮಾತಾಡ್ತಿದ್ದರು
ಆದರೆ ನಾನು ಮಾತ್ರ  ಮ್ಯೂಟ್ ಆಗಿದ್ದೆ.

ವೈದ್ಯರು ಬಂದರು .... ಪರೀಕ್ಷಿಸಲು,

ನಾನೆಲ್ಲೋ ವೈದ್ಯಕೀಯ ತಪಾಸಣೆ ಮಾಡ್ತಾರೆ ಅನ್ಕೊಂಡ್ರೆ, ಅವರ ಪ್ರಶ್ನೆಗಳು ನನ್ನ ಕಿವಿ
ಮೇಲೆ ಕೇಂದ್ರೀಕೃತವಾಗದೆ ನನ್ನ ತಲೆ ನೆಟ್ಟಗಿದ್ಯೋ ಇಲ್ವೋ ಅಂತ ಪರೀಕ್ಷಿಸಿದ ಹಾಗಿತ್ತು.

ನೀನ್ಯಾರು  !
ಇಲ್ಲಿಗ್ಯಾಕೆ ಬಂದೆ !
ನೀನೆಲ್ಲಿದ್ದೀಯ !
ಇವರು ಯಾರು  !
ಇವರು ನಿನಗೇನಾಗಬೇಕು !
ನಿಮ್ಮ ಮನೆ ಎಲ್ಲಿರೋದು  !
ಇಲ್ಲಿಂದ ಅಲ್ಲಿಗೆ ಯಾವ ಮಾರ್ಗವಾಗಿ ಹೋಗುತ್ತೀಯ  !

ವೈದ್ಯರು ನೀನು ನೀಡಿದ ಎಲ್ಲ  ಉತ್ತರಗಳು ಸರಿ ಅಂದಾಗ, ಎರೆಡನೆ ಕ್ಲಾಸ್ ಪಾಸ್ ಆದಷ್ಟೇ
ಖುಷಿಯಾಯಿತು, ಆದರೆ ಮ್ಯೂಟ್ ಬಟನ್ ಹಾಗೆ ಇತ್ತು.

To be continued....


Tuesday, December 11, 2012

ಅಂತರಂಗದ ಮೃದಂಗ - ದ.ರಾ.ಬೇಂದ್ರೆ


ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ
ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ
ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ
ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ....



Wednesday, October 17, 2012

ಆಸೆ


ಹಿಟ್ಟಿಲ್ಲದವಗೆ ಹಿರಿತನದ ಆಸೆ,
ಹಸಿವಿಲ್ಲದವಗೆ ಸಿರಿತನದ ಆಸೆ,
ಸಿರಿವಂತನಿಗೆ ನೆಮ್ಮದಿಯ ಆಸೆ,
ಆಸೆಯೇ ದುಃಖಕ್ಕೆ ಮೂಲವೆಂದ 
ಬುದ್ದನಿಗೆ, ಸಂದೇಶ ನೀಡುವಾಸೆ.
ನಿರಾಸೆಗಳನ್ನೇ ಆಸೆಯಾಗಿಸಿದರೆ 
ಹೇಗೆ ಕೂಸೇ !!!

Saturday, November 12, 2011

ಎಲ್ಲಿಗೆ ಪಯಣ !!!

ವಿಸ್ಮಯ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ..........
ಹರಟೆ ಹೊಡೆಯಲು ಇದ್ದ ಅರಳಿ ಕಟ್ಟೆಗಳು ಮಾಯವಾಗಿ ಮಾಯನಗರಿಯಲ್ಲಿ 
ಮಾಲ್ ಎಂಬ ನಿತ್ಯಸಂತೆಗೆ ಎಡೆ ಮಾಡಿಕೊಟ್ಟಿದೆ. ಮನೆ ಮುಂದೆ ತಂಗಾಳಿ 
ಸವಿಯುತ್ತ ಕುಳಿತ ಹರಟೆ ಹೊಡೆಯುತ್ತಿದ್ದ ದಿನಗಳು ಈಗ ಕೇವಲ ನೆನಪಾಗಿ ಉಳಿದಿವೆ.

ಹಬ್ಬಕ್ಕೊಮ್ಮೆಯೋ ಅಥವಾ ಸಿನಿಮಾ ನೆಪದಲ್ಲಿ ಎಂದೋ ಒಮ್ಮೆ ಹೋಟೆಲ್ ನೋಡುತ್ತಿದ್ದ 
ದಿನಗಳು, ಎಷ್ಟು ಚೆನ್ನಾಗಿರ್ತಿತ್ತು, ಖಾಲಿ ದೋಸೆ ಚಟ್ನಿ, ಮಸಾಲ ದೋಸೆ, ಮತ್ತು ಕಾಫಿಗೆ 
ಮಾತ್ರ ಹೋಟೆಲ್ ತಿಂಡಿ ಸೀಮಿತವಾಗಿದ್ದ ದಿನಗಳು ಅವು, ಇಡ್ಲಿ, ಉಪ್ಪಿಟ್ಟು ದುಡ್ಡು ಕೊಟ್ಟು 
ತಿನುತ್ತಿದವ್ರು ತುಂಬಾನೇ ಕಡಿಮೆ ಜನ. 

ನನಗೆ ನೆನಪಿರುವಂತೆ ಆ ದಿನಗಳಲ್ಲಿ ಸೀಮೆ ಎಣ್ಣೆ, ಮತ್ತು ಸಿನಿಮಾ ಟಿಕೆಟ್ಗೆ ಮಾತ್ರ ಜನ 
ಸಾಲಾಗಿ ನಿಲ್ಲುತ್ತಿದ್ದರು, ಆದರೆ ಇವತ್ತು ಜನ ಸಾಲಾಗಿ ನಿಲ್ಲೋದು ಕಾಫಿ ಕುಡ್ಯಕ್ಕೆ, ಬಿಲ್ 
ಕಟ್ಟಕ್ಕೆ, ದುಡ್ಡು ತೊಗೊಳಕ್ಕೆ, ಮತ್ತು ಸಾಮನ್ ತೊಗೊಂಡ್ರೆ ಹಣ ಪಾವತಿಸೋದಕ್ಕೆ.
ಸೀಮೆ ಎಣ್ಣೆ ಮತ್ತು ಸಿನಿಮಾ ಎರೆಡು ಅಸ್ತಿತ್ವವನ್ನೇ ಕಳೆದುಕೊಂಡಿರುವುದು ಶೋಚನೀಯ.


ಅರಳಿ ಮರದ ಗಾಳಿ ಹೋಗಿ ಹವಾ ನಿಯಂತ್ರಿತ ಕಟ್ಟಡಗಳು ಬಂದರು ಆ ಹಿತವನ್ನು 
ಕೊಡಲಿಲ್ಲ, ಅತ್ಯಾಧುನಿಕ ಹೋಟೆಲ್ ಬಂದರು ಆ ಚಟ್ನಿ ಸಾಂಬಾರ್ ರುಚಿ ಮತ್ತೆ ಸಿಗಲೇ ಇಲ್ಲ.
ಇಂದು ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ಭರ್ತಿಮಾಡಲು ಹೊಡೆದಾಡಿದಷ್ಟು ಅವತ್ತು ಸೀಮೆ 
ಎಣ್ಣೆಗು ಹೊಡೆದಾಡುತ್ತಿರಲಿಲ್ಲ....

ನಾ ನಡೆದು ಬಂದ ಹಾದಿಯನ್ನೊಮ್ಮೆ ಹಿಂದುರಿಗಿ ನೋಡಿದಾಗ ....
ಎಲ್ಲಿಗೆ ಪಯಣ !
ಯಾವುದೋ ದಾರಿ ?
ಏಕಾಂಗಿ ಸಂಚಾರಿ........
ಎನ್ನುವ ಸಾಲುಗಳು ಡಾ l ಪಿ. ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿ ನನ್ನ ಪ್ರಶ್ನಿಸಿದಂತೆ ಭಾಸವಾಗುತ್ತದೆ.

Sunday, November 6, 2011

ಬಂಧ

ಆಗಸದಿಂದ ಭುವಿ ಚಂದ,
ಭುವಿಯಿಂದ ಆಗಸ ಅಂದ, 
ಏನಿದರ ಋಣಾನುಬಂಧ !!
ಮೇಲು ಕೀಳನು ಮರೆತ ಸಂಬಂಧ, 
ನಾವೇಕೆ ಮರೆತೆವು ಈ ಅನುಬಂಧ  ???

Saturday, October 22, 2011

prakruthi prasad: ಸೃಷ್ಟಿ

prakruthi prasad: ಸೃಷ್ಟಿ: ಸೃಷ್ಟಿಯ ಚಮತ್ಕಾರವೇ ವಿಸ್ಮಯ !!! ಯುಗ ಯುಗಗಳಿಂದ ಬದಲಾಗದ ಭುವಿ - ಬಾನಿನ ಅಂತರ, ಸೂರ್ಯ - ಚಂದ್ರರ ಕಣ್ಣಾ ಮುಚ್ಚಾಲೆ, ತಾರೆಗಳ ಹೊಳಪು, ಮೋಡಗಳ ವೈವಿದ್ಯಮಯ ಚಿತ್ತಾರ...

ಸೃಷ್ಟಿ


ಸೃಷ್ಟಿಯ ಚಮತ್ಕಾರವೇ ವಿಸ್ಮಯ !!!

ಯುಗ ಯುಗಗಳಿಂದ ಬದಲಾಗದ ಭುವಿ - ಬಾನಿನ ಅಂತರ,

ಸೂರ್ಯ - ಚಂದ್ರರ ಕಣ್ಣಾ ಮುಚ್ಚಾಲೆ, ತಾರೆಗಳ ಹೊಳಪು,

ಮೋಡಗಳ ವೈವಿದ್ಯಮಯ ಚಿತ್ತಾರ, ಬಾನಂಗಳದಲ್ಲಿ ಹಿಂಡು ಹಿಂಡಾಗಿ 

 ಚೆಲ್ಲಾಟವಾಡುವ ಪಕ್ಷಿಗಳ ಕಲರವ, ಪ್ರಾಣಿಗಳ ಆಹಾರ, ವಿಹಾರ, 

ಹಾವಿನ ಚಲನ, ನವಿಲಿನ ನರ್ತನ, ಚಿಮ್ಮುವ ಜಿಂಕೆಗಳು, ಹೊಸಕುವ ಭೀತಿ 

ಇದ್ದರು ಭುವಿಯ ಮೇಲೆ ಬಿಂಕದಿ ನಡೆಯುತ್ತಾ ಆಹಾರ ಹುಡುಕಿಕೊಳ್ಳುವ 

ಹುಳು ಹುಪ್ಪಟೆಗಳ ಎಂದು ಕಡಿಮೆಯಾಗದ ಚೇತನ, ಸಾಲು ಸಾಲಾಗಿ  

ಮೂಟೆ ಹೊರುವ ಇರುವೆಗಳು, ರಂಗು ಬದಲಿಸದ ಚಿಟ್ಟೆಗಳು, ಬಣ್ಣ ಬದಲಾದರು 

ಫಸಲು ಕೊಡುವ ಮಣ್ಣು, ಕಾಣದಿದ್ದರೂ ಸಕಲ ಜೀವರಾಶಿಗಳನ್ನು ಬದುಕಿಸುವ ಗಾಳಿ,

ಭೀತಿಯಿಲ್ಲದೆ ಕಾಡು - ಮೇಡುಗಳಲ್ಲಿ ಹರಿವ ನೀರು ದಾಹ ತೀರಿಸುವ ಪರಿ. ಅವಶ್ಯಕತೆ 

ಹೆಚ್ಚಾದರು ಸಿಹಿ ಕಡಿಮೆಯಾಗದ ಹಣ್ಣು, ಬಿಸಿಲೋ, ಚಳಿಯೋ, ಮಳೆಯೋ ಅಚ್ಚಳಿಯದೆ 

ಹಸಿರಾಗೇ ಉಳಿದಿರುವ ನೇಸರ. 

ಭುವಿಯ ಉದ್ದಗಲಕ್ಕೂ ಅರಮನೆಯಿಂದ ಗುಡಿಸಲವರೆಗೂ ಎಲ್ಲರನ್ನು ಕಾಪಾಡುವುದು ಸೂರು, 

ಆಹಾರ, ನೀರು, ಇಂತಹ ವಿಸ್ಮಯ ಸೃಷ್ಟಿಗೆ ಸೀಮಾರೇಖೆಯ ಮಾನವ !!!

ಸೃಷ್ಟಿಯ ನಿಯಮದಂತೆ ಹುಟ್ಟುವ ಮಾನವ ಮನುಷ್ಯನಾಗಿ ಉಳಿಯದೆ, ಜಾತಿ, ಮತ,

ಪಂಗಡ, ಭಾಷೆ, ಪದ್ಧತಿ ಎಂಬ ಅಂಕುಶಗಳಿಗೆ ಸೀಮಿತವಾಗುತ್ತ ಸಾಗುತ್ತಾನೆ, ದ್ವೇಷ,

ಅಸೂಯೆ, ಭಲ ಪ್ರದರ್ಶನಕ್ಕೆ ಭುವಿಯನ್ನು ವಿಂಗಡಿಸುತ್ತಾ ಸಾಗುತ್ತಾನೆ. ಭುವಿಗೆ 

ಬೇಲಿ ಹಾಕುವ ದುಸ್ಸಾಹಸದಲ್ಲಿ ಮನುಷ್ಯನಾಗಿ ಬದುಕುವುದನ್ನೇ ಮರೆತಿದ್ದಾನೆ.


ಹುಟ್ಟಿದಕ್ಕೆ ಸುಂಕ, ಕಲಿಯಲು ಸುಂಕ, ಆಹಾರಕ್ಕೆ ಸುಂಕ, ಬದುಕಲು ಸುಂಕ, ವರಿಸಲು ಸುಂಕ, 

ಚಲಿಸಲು ಸುಂಕ,ತಾ ಸೃಷ್ಟಿಸಿಕೊಂಡಿರುವ ನಿಯಮಿತ ನರಕದ ಅಸುಖವನ್ನು ಆಸ್ವಾದಿಸಲು 

ದಂಡ ಕಟ್ಟಲೇಬೇಕು. ಏಕೆಂದರೆ ಸೃಷ್ಟಿಯೆಂಬ ಸ್ವರ್ಗದಲ್ಲಿ, ಸುಖವನ್ನು ಸುಂಕವಿಲ್ಲದೆ ಹಂಚ್ಚುವರು ...

ಪ್ರಕೃತಿ 

Friday, October 21, 2011

ಬಣ್ಣ !


ಚಿಮ್ಮುವ ಬಣ್ಣಗಳ ಹುರುಪಿಗೆ 
ಪರದೆಯ ಅಂಗಳವೆ ಸಾಕ್ಷಿ  !!!
ವಿವಿಧ ಆಕಾರ ಪ್ರಕಾರಗಳಿಗೂ 
ಜೀವಂತ ಕಳೆ ಕೊಡುವುದೀ ಬಣ್ಣ !!! 
ಶೃಂಗಾರದ ಎಳೆಯೋ, 
ನೇಪತ್ಯದ ತಿರುವೋ,
ಬಗೆ ಬಗೆಯ ಭಾವನೆಗಳ 
ಹುಟ್ಟುಹಾಕುವುದೀ ಬಣ್ಣ !!!
ಬದುಕಿನ ಪೂರ್ಣವಿರಾಮವನ್ನು 
ಚುಕ್ಕಿಯಾಗಿಸಿ ನಕ್ಕಿಯಂತೆ  
ಹೊಳಪು ನೀಡುವುದೀ ಬಣ್ಣ !!!  

ಪ್ರಕೃತಿ 

Tuesday, November 23, 2010

ಮನುಜ

ಕನಸನ್ನು ಹೊತ್ತು ನಡೆಯುವ
ಕಾರ್ಮೋಡಗಳ ದಾಟುವ ಬೆಳಕಿನಂತೆ 
ನಕ್ಷತ್ರಗಳ ನೋಡಿ ಎಣಿಸುವ
ಚಂದಿರನ ಮಂದಹಾಸದಂತೆ 
ಹಸಿರ ನೆಟ್ಟು ಬೆಳೆಸುವ 
ಪ್ರಕೃತಿಯ ಮಡಿಲಿನಂತೆ
ಮೀನಿನ ಆನಂದ ಸವಿಯುವ 
ತುಂಬಿದ ಕೆರೆ, ನದಿ, ಸಮುದ್ರದಂತೆ 
ಹಣ್ಣ ಕಂಡು ಹಾರುವ 
ಆಕಾಶದ ಪಕ್ಷಿಗಳಂತೆ 
ಬೇಟೆಯಾಡಿ ಬದುಕುವ 
ಕಾಡಿಲ್ಲದ ಪ್ರಾಣಿಗಳಂತೆ 
ಅಸೂಯೆ ಬಿಟ್ಟು ಬದುಕುವ 
ಸ್ವಾರ್ತವಿಲ್ಲದ ಮನುಜರಂತೆ.

Saturday, November 20, 2010

ಜೀವನ

ಎಂತಹ ವಿಸ್ಮಯ ಪ್ರಪಂಚ, ಎಲ್ಲವು ಇದ್ದು ಇಲ್ಲದ ಹಾಗೆ ಬದುಕುವ ಜನರೆಲ್ಲಿ,
ಏನೋ ಒಂದು ಕೊರತೆ ಇದ್ದು ಜೀವನವನ್ನು ಎದುರಿಸುವ ಮನುಷ್ಯರೆಲ್ಲಿ, ತಮ್ಮ ತಪ್ಪೇ 
ಇಲ್ಲದೆ ಜೀವನವನ್ನು ಎದುರಿಸುವ ಮಕ್ಕಳೆಲ್ಲಿ ???

೨ ಅಡಿ ಉದ್ದ ಇರಬಹುದು ಈ ವ್ಯಕ್ತಿ, ಮಾತನಾಡಿದರೆ ಕೀರಲು ಧ್ವನಿ, ಅಪಾರ ಬುದ್ದಿ ಶಕ್ತಿ 
ಯಾವುದೇ ಚಿತ್ರವನ್ನು ಬಿಡಿಸಬಲ್ಲ, ಮಕ್ಕಳಂತೆ ಇರುವ ಇವನ್ನ ಪುಟ್ಟ ಕೈಗಳು....
ಮಾತು ಹೊರಡುವುದಿಲ್ಲ, ಕಣ್ಣಿನಲ್ಲಿ ಕಂಗೊಳಿಸುವ ಆ ಹೊಳಪು, ಬದುಕಿ ತೋರಿಸುತ್ತೇನೆ 
ಎನ್ನುವ ಛಲ ಕಾಲ್ನಡಿಗೆಯಲ್ಲಿ ಹುರುಪು, ಕೈ ಸನ್ನೆ ಮಾಡಿ ತೋರಿಸುವ ಈತನ ಜ್ಞಾಪಕ 
ಶಕ್ತಿಗೆ ಒಂದು ಸಲಾಂ....

ಮನ ತುಂಬಿ ಬರುವ ಸಂತಸ, ನೋಡಿದರೆ ಮರೆಯಲಾಗದ ವ್ಯಕ್ತಿತ್ವ, ಶುಬ್ರ ವಸ್ತ್ರವ 
ಧರಿಸಿ ಯಾವುದು ದೇಶದ ರಾಜಕುಮಾರನಂತೆ ಕಂಗೊಳಿಸುತ್ತಾನೆ ...................

ಜೀವನ ಅನ್ನೋ ಹೆಸರು ಇವನಿಗೆ, ನಮ್ಮಂತಹ ಅನೇಕರಿಗೆ ಜೀವನದ ಅತಿ ದೊಡ್ಡ ಪಾಠ 
ಕಲಿಸಿದ್ದಾನೆ, ಕಣ್ತೆರೆಸಿದ್ದಾನೆ.
ಜೀವನ ಒಬ್ಬ ೧೮ ವರ್ಷದ ಯುವಕ, ಜೀವನದ ಹಲವು ತೊಂದರೆಗಳಿಂದ  ಬಳಲ್ಲುತ್ತಿದ್ದಾನೆ,
ಇವನಿಗೆ ಬೇಕಾಗಿರುವುದು ನಮ್ಮ ಅನುಕಂಪವಲ್ಲ, ನಮ್ಮೊಂದಿಗಿನ ಒಡನಾಟ.......

ಬದುಕು ಬದುಕಿರೋ..

ಮೆಚ್ಚುವ ಬದುಕು ಬದುಕಿರೋ,
ಪರರನ್ನು ಮೆಚ್ಚಿಸುವ ಬದುಕು ಬದುಕಲ್ಲ,
ಇಹವನು ತ್ಯಜಿಸಿ ಬದುಕಿಲ್ಲ,
ಇಹದೊಳಗೆ ಬದುಕು ಕಾಣಿರೋ.

ಮೇಲು ಕೀಳೆಂಬ ಭೇದಗಳಿಲ್ಲ,
ಜಾತಿ ಮತವೆಂಬ ನಿಂದನೆಗಳಿಲ್ಲ ,
ಪ್ರೀತಿ ಮಮತೆ ಎಂಬ ಮಮಕಾರದಲಿ, 
ಬಾಂಧವ್ಯ ಬವಣೆಗಳ ಮಿಶ್ರಣದಲಿ.

ಸತ್ವ ಸಹನೆಗಳ ಬದುಕು,
ಸ್ನೇಹ ಸಹಜದ ಬದುಕು,
ಸಹೃದಯ ಮಮಕಾರದ ಬದುಕು,
ಮೆಚ್ಚುವ ಬದುಕು ಬದುಕಿರೋ.....

ಅಮ್ಮ

ಕನಸುಗಳ ಕಾಣುತ್ತ ಕಳೆವ ದಿನಗಳು 
ದಿನಗಳು ಹತ್ತಿರವಾದಂತೆ  ತವಕ
ನೋವನ್ನು ಸಹಿಸಿ ಜೀವ ನೀಡುವ ಪರಿ 
ಆ ಜೀವವನ್ನು ತನ್ನ ಎದೆಗೊತ್ತಿ ಮುದ್ದಿಸುವುದು 
ಅತ್ತಾಗ ಹಾಲು, ನಕ್ಕಾಗ ಕಲ್ಲು ಸಕ್ಕರೆ
ತೆವಳಿದರೆ ಸಂತಸ, ಮೊದಲ ಹೆಜ್ಜೆಯಿಟ್ಟಾಗ 
ಹೇಳಿಕೊಳ್ಳಲಾಗದ ಆನಂದ ಭಾಷ್ಪ
ಚೇಷ್ಟೆ ಮಾಡುತ್ತಿದ್ದಾಗ ಪ್ರೀತಿಯ ಪೆಟ್ಟು 
ಶಾಲೆಗೇ ಬಿಡುವಾಗ ತವರನ್ನು ಅಗಲಿದ ಅನುಭವ
ಮೆಟ್ಟಿಲುಗಳನ್ನು ಏರುತ್ತಿರುವಾಗ ಕಣ್ಣಂಚಿನಲಿ 
ತೊಟ್ಟಿಕ್ಕುವ ಆ ಮುತ್ತಿನ ಹನಿಗಳು
ತನ್ನ ಎಲ್ಲ ನೋವುಗಳನ್ನು ಮರೆತು ಸ್ಪಂದಿಸುವ  
ಆ ವಿಶಾಲ ಹೃದಯ........ ಅಮ್ಮನಲ್ಲಿ ಮಾತ್ರ ಸಾಧ್ಯ 

ಕನಸೋ ನನಸೋ !

ಪ್ರಾಯದ ಪ್ರೌಢಿಮೆಯ ಅರಿವಿಲ್ಲ 
ಪರ ಊರಿನ ವ್ಯಾಮೋಹ ಸೆಳೆಯಿತಲ್ಲ 
ಬೆಳಕನ್ನು  ನೋಡಿಯೇ ಇಲ್ಲ,
ಕತ್ತಲಲ್ಲಿ ಬೆಳಕಿನ ದೀಪಗಳೇ ಎಲ್ಲ.

ಹೂವಿನ ಚೆಲುವನ್ನು ಸಹಿಸದವರು 
ಗಿಡದಲ್ಲಿದ್ದ ಹೂವನ್ನು ಕದ್ದು, ಕಿತ್ತು ತಂದರು 
ಹೊಸ ತೋಟವೆನ್ನುವ ಕನಸು ಹೂವಿಗೆ 
 ಕನಸೇ ಬಾರದ ಹಂಗೆ ಬಿಗಿದ ಕಪ್ಪು ಬಟ್ಟೆ ಕಣ್ಣಿಗೆ

ಹೂವಿನ ಎಸೆಳುಗಳನ್ನು ಕಿತ್ತು ಹಾಕಿ 
ಹೂವಿನ ಸಾರವನ್ನು ದುಸ್ಸಾರವಾಗಿಸಿ 
ಅಸ್ತವ್ಯಸ್ತವಾಗಿ ಬಿದ್ದಿದ್ದ ಎಸೆಳುಗಳನ್ನು 
ಕನ್ನಡಿ ಮುಂದೆ ಜೋಡಿಸಿಕೊಳ್ಳುವಾಗ,


ಕನ್ನಡಿಯ ಪ್ರತಿಬಿಂಬ ಕೇಳಿತು 
ನೀನು ಸುಖಿಸಿದ್ದು ಕನಸೋ ನನಸೋ !!!

ಬದುಕು

ನೋಡುವುದು, ಕೇಳುವುದು 
ಮಾಡುವುದು ಬಹಳಷ್ಟಿದೆ 
ನೋಡಲಾಗುತ್ತಿಲ್ಲ ಕೇಳಲಾಗುತ್ತಿಲ್ಲ ಮಾಡಲಾಗುತ್ತಿಲ್ಲ 
ಎಲ್ಲವನ್ನು ನೋಡಿ ನೋದದಂಥ 
ಕೇಳಿ ಕೇಳಿದಂಥ
ಮಾಡಿ ಮಾಡದಂತ ಬದುಕು ನಮ್ಮದು 
ಆದರೆ ಎಲ್ಲವನ್ನು ನೋಡದಂತೆ ಕೇಳದಂತೆ 
ಏನೇನೋ ಬ್ರಮ್ಹೆಯಲ್ಲೇ ಸಾಗಿದೆ 
ಪೂರ್ಣವಲ್ಲದ ಪೂರ್ತಿಯಾಗದ 
ಒಮ್ಮೆ ಮುಕ್ತಾಯ ಕಾಣುವ ಈ ಬದುಕು

ಮನಸು

ಎಷ್ಟು ವಿಚಿತ್ರ ಈ ಮನಸು
ಯಾವುದೇ ಬಣ್ಣವಿಲ್ಲ 
ಯಾವುದೇ ರೂಪವಿಲ್ಲ 
ಆದರು ಶ್ರುಷ್ಟಿಸುತ್ತ ನಡೆಯುತ್ತದೆ
ರೇಖೆಗಳ ಹಾಗೆ ಎಳೆದು 
ಪದವಾಗಿ ಮೆರೆದು 
ನಾದಗಳ ಹಾಗೆ ಜ್ಹೆಂಕರಿಸಿ 
ಮೌನಗಳನು ಸೀಳಿಕೊಂಡು 
ಮಂಕುತನವ ಮುಸುಕಿಕೊಂಡು 
ಉತ್ತುಂಗವಾಗಿ ನೆಗೆಯುವ ಜಲಪಾತದಂತೆ 
ಸದಾ ಚಿಮ್ಮುತ್ತಿರುವುದು ಈ ಮನಸು 

ನಾವೆಲ್ಲಿದ್ದೇವೆ ?

ನಾವೆಲ್ಲಿದ್ದೇವೆ ಜಗದೊಳು 
ನಾವೆಲ್ಲಿದ್ದೇವೆ !!!
ಮಣ್ಣಲ್ಲಿ ಮಣ್ಣಾಗಿ 
ಕಾಡಲ್ಲಿ ಕಾಡಾಗಿ 
ನೀರಲ್ಲಿ ನೀರಾಗಿ 
ಗಾಳಿಯಲ್ಲಿ ಲೀನವಾಗಿ 
ಈ ಜನ ಜಂಗುಳಿಯಲ್ಲಿ ಕಾಣದಂತೆ,
ಚಲಾವಣೆಯಲ್ಲಿ ಇಲ್ಲದ ನಾಣ್ಯಗಳಂತೆ..
ನಾವೆಲ್ಲಿದ್ದೇವೆ ???