Saturday, November 12, 2011

ಎಲ್ಲಿಗೆ ಪಯಣ !!!

ವಿಸ್ಮಯ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ..........
ಹರಟೆ ಹೊಡೆಯಲು ಇದ್ದ ಅರಳಿ ಕಟ್ಟೆಗಳು ಮಾಯವಾಗಿ ಮಾಯನಗರಿಯಲ್ಲಿ 
ಮಾಲ್ ಎಂಬ ನಿತ್ಯಸಂತೆಗೆ ಎಡೆ ಮಾಡಿಕೊಟ್ಟಿದೆ. ಮನೆ ಮುಂದೆ ತಂಗಾಳಿ 
ಸವಿಯುತ್ತ ಕುಳಿತ ಹರಟೆ ಹೊಡೆಯುತ್ತಿದ್ದ ದಿನಗಳು ಈಗ ಕೇವಲ ನೆನಪಾಗಿ ಉಳಿದಿವೆ.

ಹಬ್ಬಕ್ಕೊಮ್ಮೆಯೋ ಅಥವಾ ಸಿನಿಮಾ ನೆಪದಲ್ಲಿ ಎಂದೋ ಒಮ್ಮೆ ಹೋಟೆಲ್ ನೋಡುತ್ತಿದ್ದ 
ದಿನಗಳು, ಎಷ್ಟು ಚೆನ್ನಾಗಿರ್ತಿತ್ತು, ಖಾಲಿ ದೋಸೆ ಚಟ್ನಿ, ಮಸಾಲ ದೋಸೆ, ಮತ್ತು ಕಾಫಿಗೆ 
ಮಾತ್ರ ಹೋಟೆಲ್ ತಿಂಡಿ ಸೀಮಿತವಾಗಿದ್ದ ದಿನಗಳು ಅವು, ಇಡ್ಲಿ, ಉಪ್ಪಿಟ್ಟು ದುಡ್ಡು ಕೊಟ್ಟು 
ತಿನುತ್ತಿದವ್ರು ತುಂಬಾನೇ ಕಡಿಮೆ ಜನ. 

ನನಗೆ ನೆನಪಿರುವಂತೆ ಆ ದಿನಗಳಲ್ಲಿ ಸೀಮೆ ಎಣ್ಣೆ, ಮತ್ತು ಸಿನಿಮಾ ಟಿಕೆಟ್ಗೆ ಮಾತ್ರ ಜನ 
ಸಾಲಾಗಿ ನಿಲ್ಲುತ್ತಿದ್ದರು, ಆದರೆ ಇವತ್ತು ಜನ ಸಾಲಾಗಿ ನಿಲ್ಲೋದು ಕಾಫಿ ಕುಡ್ಯಕ್ಕೆ, ಬಿಲ್ 
ಕಟ್ಟಕ್ಕೆ, ದುಡ್ಡು ತೊಗೊಳಕ್ಕೆ, ಮತ್ತು ಸಾಮನ್ ತೊಗೊಂಡ್ರೆ ಹಣ ಪಾವತಿಸೋದಕ್ಕೆ.
ಸೀಮೆ ಎಣ್ಣೆ ಮತ್ತು ಸಿನಿಮಾ ಎರೆಡು ಅಸ್ತಿತ್ವವನ್ನೇ ಕಳೆದುಕೊಂಡಿರುವುದು ಶೋಚನೀಯ.


ಅರಳಿ ಮರದ ಗಾಳಿ ಹೋಗಿ ಹವಾ ನಿಯಂತ್ರಿತ ಕಟ್ಟಡಗಳು ಬಂದರು ಆ ಹಿತವನ್ನು 
ಕೊಡಲಿಲ್ಲ, ಅತ್ಯಾಧುನಿಕ ಹೋಟೆಲ್ ಬಂದರು ಆ ಚಟ್ನಿ ಸಾಂಬಾರ್ ರುಚಿ ಮತ್ತೆ ಸಿಗಲೇ ಇಲ್ಲ.
ಇಂದು ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ಭರ್ತಿಮಾಡಲು ಹೊಡೆದಾಡಿದಷ್ಟು ಅವತ್ತು ಸೀಮೆ 
ಎಣ್ಣೆಗು ಹೊಡೆದಾಡುತ್ತಿರಲಿಲ್ಲ....

ನಾ ನಡೆದು ಬಂದ ಹಾದಿಯನ್ನೊಮ್ಮೆ ಹಿಂದುರಿಗಿ ನೋಡಿದಾಗ ....
ಎಲ್ಲಿಗೆ ಪಯಣ !
ಯಾವುದೋ ದಾರಿ ?
ಏಕಾಂಗಿ ಸಂಚಾರಿ........
ಎನ್ನುವ ಸಾಲುಗಳು ಡಾ l ಪಿ. ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿ ನನ್ನ ಪ್ರಶ್ನಿಸಿದಂತೆ ಭಾಸವಾಗುತ್ತದೆ.

No comments:

Post a Comment