Saturday, December 10, 2016

ಎ ಟಿ ಎಂ ಅವಾಂತರ 


ಹೊಸ ಹಣಕಾಸು ನೀತಿ ಜಾರಿಯಾದ ನಂತರ, ಜನಸಾಮಾನ್ಯರು ಅದನ್ನು ಒಪ್ಪಿಕೊಂಡಿರುವುದೇನೋ ಸರಿ,
 ಆದರೆ ಅನುಸರಿಸುತ್ತಿರುವ ರೀತಿ  ಮಾತ್ರ ಚಿತ್ರ ವಿಚಿತ್ರ.

ಯಾವ ಎ ಟಿ ಎಂ ಅಲ್ಲಿ ದುಡ್ಡಿದ್ಯೋ, ಅಲ್ಲೊಂದು ಕ್ಯೂ, ಎಲ್ಲ ವಯಸ್ಸಿನ ಜನರು ಯಾವುದೋ
ಶೋಕಾಚರಣೆಗೆ ಬಂದಿರುವಂತೆ, ದೀರ್ಘಾಲೋಚನೆ ಮಾಡುತ್ತಾ ನಿಂತಿರುವುದನ್ನು ಗಮನಿಸಬಹುದು.
ಕೆಲವರಿಗೆ ಬದಲಾವಣೆಯಲ್ಲಿ  ಖುಷಿಯಾದರೆ, ಕೆಲವರಿಗೆ ದುಃಖ.

ಯುವ ಜನತೆಯ ಉತ್ಸಾಹವನ್ನು ಇಲ್ಲಿ ಮೆಚ್ಚಲೇಬೇಕು, " ಮಚ್ಚಾ / ಗುರು, ಕ್ಯೂ ಅಲ್ಲಿ ನಿಂತಿದ್ದೀನಿ,
ಇನ್ನೊಂದ್ ೧೦ ಜನ ಇದಾರೆ ಅಷ್ಟೇ, ನಿಂಗು ಕಾಸ್ ಬೇಕಾದ್ರೆ ಬೇಗ ಬಾ ಅಂತ ಫೋನ್ ಇಡುತ್ತಿದಂತೆ,
ಒಂದಿಬ್ಬರು ದೇವರಿಗಿಂತ ವೇಗವಾಗಿ ಪ್ರತ್ಯಕ್ಷ ಆಗ್ತಾರೆ. ಇವರ ಈ ವರ್ತನೆಯಿಂದ, ಇವರ ಹಿಂದೆ ನಿಂತಿರುವ
ಮತ್ತು ದುಡ್ಡಿನ ಅತ್ಯಂತ ಅವಶ್ಯಕತೆ ಇರುವ ಯಾವುದೋ ವ್ಯಕ್ತಿಗೆ ದುಡ್ಡು ಸಿಗದಂತೆ ಆಗಬಹುದು ಎನ್ನುವ
ಸಣ್ಣ ಕಾಳಜಿ ಕೂಡ ಇವರಿಗೆ  ಇರುವುದಿಲ್ಲ.

ಇನ್ನು ವಯಸ್ಸಾದವರ ಪಾಡು ಮಾತ್ರ ಕೇಳಲೇಬೇಡಿ, ಅವರ ಸರಧಿ ಬರುವವರೆಗೂ ಕುಳಿತಿರುವ
ವ್ಯವಸ್ಥೆಯಾಗಲಿ, ಅಥವ ಸಾರ್ವಜನಿಕರಿಗೆ ಅವರ ಬಗ್ಗೆ ಕನಿಕರ ಇರುವುದು ತೀರಾ ಕಡಿಮೆ.

ಎ ಟಿ ಎಂ ಒಳಗೆ ಒಬ್ಬರೇ ಇರಬೇಕು, ಆದರೆ ಇಲ್ಲಿ ಕ್ಯೂ ಹಿಂಬಾಲಿಸುತ್ತದೆ, ಇನ್ನು ಕೆಲವು ಸಲ
ಆ ಸೆಕ್ಯೂರಿಟಿ ಗಾರ್ಡ್ ಕೂಡ ಫೋನಿನಲ್ಲಿ ಮಾತನಾಡುತ್ತ, ಎ ಟಿ ಎಂ ಒಳಗೆ  ಇರುತ್ತಾರೆ.

ಯಾವುದಕ್ಕಾಗಿ ಈ ಆತುರ !

ಎ ಟಿ ಎಂ ಬಳಸುವಾಗ ಅನುಸರಿಸಬೇಕಾದ ವಿಧಾನ 

೧.  ಹೆಲ್ಮೆಟ್ ಧರಿಸಿ ಎ ಟಿ ಎಂ ಒಳಗೆ ಹೋಗಬಾರದು

೨.  ಫೋನಿನಲ್ಲಿ ಮಾತನಾಡಬಾರದು

೩.  ಹಣ ಪಡೆಯಲು  ಹೋದವರು ಮಾತ್ರ ಎ ಟಿ ಎಂ ಒಳಗೆ ಇರಬೇಕು.

೪.  ಯಾರಾದರೂ ಹಣ ಪಡೆಯುತ್ತಿದ್ದರೇ, ಅವರು ಹೊರ ಬರುವವರೆಗೂ ಕಾಯಬೇಕು

೫.  ನಾವು ಕ್ಯೂನಲ್ಲಿದ್ದು, ಸ್ನೇಹಿತರನ್ನು ಕರೆದು ನಮ್ಮೊಂದಿಗೆ ನಿಲ್ಲಿಸಿಕೊಳ್ಳಬಾರದು

೬.  ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಇದ್ದಲ್ಲಿ, ಹಣ ಪಡೆದ ಮತ್ತು ಬಾಕಿ ಇರುವ ಮೊತ್ತದ
ಸೂಚನೆ ಮೊಬೈಲ್ ಅಲ್ಲೇ ನೋಡಬಹುದು,  ಕಸದ ಬುಟ್ಟಿ ತುಂಬಿಸಲು ಪ್ರಿಂಟ್ ಔಟ್ ಯಾಕೆ ??

ನಿಮಗೆ ಇದನ್ನು ಪಾಲಿಸುವ ಉದ್ದೇಶವಿಲ್ಲದಿದ್ದರೆ, ದಯಮಾಡಿ ತಿಳಿಸಿ. ನೀವು ನಿಂತಿರುವ
ಎ ಟಿ ಎಂ ಕ್ಯೂ ನಲ್ಲಿ, ನಾನು ನಿಲ್ಲುವುದಿಲ್ಲ.

Wednesday, September 28, 2016

ಮ್ಯೂಟ್ ಬಟನ್ - 1

ಪ್ರೀತಿಯ ಸ್ನೇಹಿತರೆ,

ಮ್ಯೂಟ್ ಬಟನ್

ಬದುಕಿನುದ್ದಕ್ಕೂ ಎಲ್ಲವು ನೆಟ್ಟಗಿರುವ ಒಬ್ಬ ವ್ಯಕ್ತಿಗೆ, ಇದ್ದಕ್ಕಿದ್ದಂತೆ ಏನು ಕೇಳಿಸದಾದಾಗ
ಹೇಗಾಗಿರಬಾರದು  ???

ಈ ಬ್ಲಾಗಿನ ಮುಖೇನ ನನ್ನ ಬದುಕಿನ ಪಥವನ್ನು ನಿಮ್ಮೊಂದಿಗೆ ಹಂಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ,
ತಪ್ಪಿದ್ದಲ್ಲಿ, ತಿದ್ದಿ, ತೀಡಿ, ಕೈ ಜೋಡಿಸಿ.

ಮ್ಯೂಟ್ ಬಟನ್ ಒಂದು  ಸರಣಿ ... ಒಂದು ಪುಟದಲ್ಲಿ ಮುಗಿಯದ ಕಥೆ ..
*********************************


ಒಂದು ದಿನ ಇದಕ್ಕಿದ್ದಂತೆ ಅಣ್ಣವರು ಕಿಡ್ನಾಪ್ ಆದ ದಿನದ ತರಹ, ಎಲ್ಲವೂ ಮೌನ.

ಟಿ ವಿ ಲಿ ಯಾರೋ ಮಾತಾಡ್ತಾ ಇರೋವಾಗ ಮ್ಯೂಟ್ ಬಟನ್ ಒತ್ತಿದರೆ, ಹೇಗಿರತ್ತೋ
ಹಾಗೆಯೇ ವಾಸ್ತವದಲ್ಲಿ ನನ್ನ ಸುತ್ತ ಮುತ್ತ ಇರೋವ್ರು ಕಾಣಿಸ್ತಿದ್ರು. ಎಲ್ಲರು ಮಾತಾಡ್ತಿದ್ದರು
ಆದರೆ ನಾನು ಮಾತ್ರ  ಮ್ಯೂಟ್ ಆಗಿದ್ದೆ.

ವೈದ್ಯರು ಬಂದರು .... ಪರೀಕ್ಷಿಸಲು,

ನಾನೆಲ್ಲೋ ವೈದ್ಯಕೀಯ ತಪಾಸಣೆ ಮಾಡ್ತಾರೆ ಅನ್ಕೊಂಡ್ರೆ, ಅವರ ಪ್ರಶ್ನೆಗಳು ನನ್ನ ಕಿವಿ
ಮೇಲೆ ಕೇಂದ್ರೀಕೃತವಾಗದೆ ನನ್ನ ತಲೆ ನೆಟ್ಟಗಿದ್ಯೋ ಇಲ್ವೋ ಅಂತ ಪರೀಕ್ಷಿಸಿದ ಹಾಗಿತ್ತು.

ನೀನ್ಯಾರು  !
ಇಲ್ಲಿಗ್ಯಾಕೆ ಬಂದೆ !
ನೀನೆಲ್ಲಿದ್ದೀಯ !
ಇವರು ಯಾರು  !
ಇವರು ನಿನಗೇನಾಗಬೇಕು !
ನಿಮ್ಮ ಮನೆ ಎಲ್ಲಿರೋದು  !
ಇಲ್ಲಿಂದ ಅಲ್ಲಿಗೆ ಯಾವ ಮಾರ್ಗವಾಗಿ ಹೋಗುತ್ತೀಯ  !

ವೈದ್ಯರು ನೀನು ನೀಡಿದ ಎಲ್ಲ  ಉತ್ತರಗಳು ಸರಿ ಅಂದಾಗ, ಎರೆಡನೆ ಕ್ಲಾಸ್ ಪಾಸ್ ಆದಷ್ಟೇ
ಖುಷಿಯಾಯಿತು, ಆದರೆ ಮ್ಯೂಟ್ ಬಟನ್ ಹಾಗೆ ಇತ್ತು.

To be continued....